ಮಧ್ಯಯುಗದಲ್ಲಿ ಕಾಶ್ಮೀರ ಪ್ರದೇಶವನ್ನು ಆಳಿದ ಪ್ರಮುಖ ರಾಜವಂಶ. ದರ್ವಾಭಿಸಾರ ಹಾಗೂ ಲೋಹಾರ ಇವು ಇವರ ರಾಜಧಾನಿಗಳು. ದರ್ವಾಭಿಸಾರ ಝೀಲಂ ನದಿ ತೀರದ ಉತ್ತರದಲ್ಲಿದ್ದರೆ, ಲೋಹಾರ ಪೂಂಚ್ ಪ್ರದೇಶದಲ್ಲಿದೆ; ಈ ಎರಡು ನಗರಗಳು ರಾಜಧಾನಿಗಳಾದುದರಿಂದ ಪ್ರಸಿದ್ಧವಾಗಿವೆ.

	ಮಧ್ಯಯುಗದಲ್ಲಿ ಮೂರು ನಾಲ್ಕು ಸಣ್ಣಸಣ್ಣ ರಾಜಮನೆತನಗಳು ಅಲ್ಲಲ್ಲಿ ಅಧಿಕಾರಕ್ಕೆ ಬಂದು ಕಾಶ್ಮೀರ ರಾಜ್ಯವನ್ನಾಳಿದವು. ಅವೆಂದರೆ ಕಲ್ಲರನ (ಅಪರನಾಮಧೇಯ, ಲಲ್ಲಿಯ) ಹಿಂದು ಷಾಹಿ ಲಲಿತಾದಿತ್ಯ ಮುಕ್ತಾಪೀಡನ ಕಾರ್ಕೋಟವಂಶ, ಉತ್ಪಲನ ಉತ್ಪಲವಂಶ, ಯಶಸ್ಕರನ ಯಶಸ್ಕರ ವಂಶ, ಪರ್ವಗುಪ್ತನ ಪರ್ವಗುಪ್ತವಂಶ, ಹಾಗೂ ಲೋಹಾರವಂಶ. ಲೋಹರಿನ್ ಕಣಿವೆಯಿಂದ ಲೋಹಾರ ಎಂಬ ಹೆಸರು ಬಂದಿದೆ. ಲೋಹಾರ ವಂಶ ದಿಡ್ಡಾ ಮಹಾದೇವಿಯಿಂದ ಬಹಳ ಪ್ರಸಿದ್ಧಿಗೆ ಬಂದಿತು. ಇವಳು ಕಾಶ್ಮೀರವನ್ನು ಆಳುತ್ತಿದ್ದ ಕ್ಷೇಮಗುಪ್ತ (950-58) ದೊರೆಯನ್ನು ಮದುವೆ ಆಗಿದ್ದಳು. ಇವಳು ಕಾಶ್ಮೀರದ ಇನ್ನೊಂದು ಶಾಖೆಯ ದೊರೆಗಳಾದ ‘ಷಾಹಿ’ ಮನೆತನದ ಭೀಮಷಾಹಿ ದೊರೆಯ ಮಗಳ ಮಗಳು. ತತ್ಕಾರಣ ಕಾಶ್ಮೀರದ ಒಂದಷ್ಟು ವಿಸ್ತಾರವಾದ ಭೂ ಭಾಗಕ್ಕೆ ಆಡಳಿತದ ಹೊಂದಾಣಿಕೆಯ ಒಂದು ಚುಕ್ಕಾಣಿ ದೊರೆತಂತಾಯಿತು-ಮೂರು ಮನೆತನಗಳ ವೈವಾಹಿಕ ಸಂಬಂಧದಿಂದ, (ಆ ಮನೆತನಗಳೆಂದರೆ: ಪರ್ವಗುಪ್ತವಂಶ, ಲೋಹಾರವಂಶ ಹಾಗೂ ಷಾಹಿ (ಹಿಂದು ಷಾಹಿ) ವಂಶ) ಕಾಶ್ಮೀರದ ರಾಜರ ಆಡಳಿತದ ಮೇಲೆ ಭೀಮಷಾಹಿಗೆ ಒಂದಷ್ಟು ಪ್ರಭಾವವನ್ನು ಬೀರಲು ಸಹಾಯವಾಯಿತು. ಇವನು ಮಾರ್ತಾಂಡ (ಬವನ) ಝರಿಗಳ ಹತ್ತಿರ ಬುಮ್ಜು ಎಂಬಲ್ಲಿ ಒಂದು ಭವ್ಯ ವಿಷ್ಣು ದೇವಾಲಯವನ್ನು ನಿರ್ಮಿಸಿ ‘ಭೀಮಕೇಶವ’ ಎಂದು ಹೆಸರಿಟ್ಟ. ಮುಸ್ಲಿಮ್ ಆಡಳಿತ ಆರಂಭವಾದ ಮೇಲೆ ಅದನ್ನು ಮುಸಲ್ಮಾನರ ಮಹತ್ತ್ವದ ವ್ಯಕ್ತಿಯೊಬ್ಬನ ದರ್ಗ ಆಗಿ ಪರಿವರ್ತಿಸಲಾಗಿದೆ. ಈ ದೇವಾಲಯ ಹರ್ಷನ ಆಳ್ವಿಕೆಯಲ್ಲಿ (1080-1101) ವಿಶೇಷ ಬೆಲೆಯುಳ್ಳ ನಿಧಿನಿದಾನ ಮೌಲಿಕ ಸಂಪತ್ತನ್ನು ಹೊಂದಿತ್ತು. ದಿಡ್ಡಾದೇವಿ ಕಾಶ್ಮೀರದ ರಾಜಕೀಯದಲ್ಲಿ ತನ್ನ ವಿಶೇಷ ಬುದ್ಧಿವಂತಿಕೆಯಿಂದ ಮತ್ತು ವಿವಿಧ ನಂಟಸ್ತಿಕೆಗಳಿಂದ ಬಹಳ ಪ್ರಮುಖ ಪಾತ್ರವನ್ನು ವಹಿಸಿದಳು.

ಸಣ್ಣಫುಲ್ಲನಿಂದ ಲೋಹಾರವಂಶ ಸ್ಥಾಪಿತವಾಯಿತೆಂದು ತಿಳಿದುಬರು ತ್ತದೆ. ಆರಂಭದ ಅರಸರು ಸಣ್ಣ ಮಾಂಡಲಿಕ ಮನೆತನದವರಾದುದರಿಂದ ಅಷ್ಟು ಪ್ರಸಿದ್ಧರಾಗಿದ್ದಿಲ್ಲ. ದಿಡ್ಡಾದೇವಿಯ ಪತಿ ಕ್ಷೇಮಗುಪ್ತ ಎಂಟು ವರ್ಷ ಅದಕ್ಷ ಆಡಳಿತ ನಡೆಸಿ ಮರಣವನ್ನಪ್ಪಿದ. ಅನಂತರ ಅವನ ಪುತ್ರ ಚಿಕ್ಕ ವಯಸ್ಸಿನಲ್ಲಿ ಪಟ್ಟಕ್ಕೆ ಬಂದ. ದಿಡ್ಡಾದೇವಿ ತನ್ನ ಮಗುವಿನ ರಕ್ಷಕಳಾಗಿ ರಾಜಪ್ರತಿನಿಧಿಯಾಗಿ ರಾಜ್ಯವನ್ನು ಆಳಿದಳು. ಅ ಸಂಧರ್ಭದಲ್ಲಿ ತನ್ನ ಆಡಳಿತದ ವ್ಯವಸ್ಥೆಯಲ್ಲಿ ಅಡ್ಡ ಬಂದವರನ್ನೆಲ್ಲ ಕಿತ್ತೊಗೆದಳು. ಅನಂತರ ರಾಜ್ಯಾಡಳಿತವನ್ನು ಸಂಪೂರ್ಣ ತನ್ನ ಕೈಯಲ್ಲಿ ತೆಗೆದುಕೊಂಡು ಪ್ರಧಾನಮಂತ್ರಿಯಾದ ಫಲ್ಗುಣನನ್ನು ಅಧಿಕಾರದಿಂದ ಕಿತ್ತೊಗೆದಳು. ಯಶೋಧರನ ದಂಗೆಯನ್ನು ಅಡಗಿಸಿ, ಅವನ ಕಡೆಯ ಕೆಲವರನ್ನು ತನ್ನ ಪಕ್ಷಕ್ಕೆ ಸೆಳೆದುಕೊಂಡು, ಅವರಿಗೆ ಆಡಳಿತದಲ್ಲಿ ಕೆಲವು ಉನ್ನತ ಹುದ್ದೆಗಳನ್ನು ಕೊಟ್ಟಳು. ಅನಂತರ ಆರಂಭದಲ್ಲಿ ಅವನು ಷಾಹೀಥಕ್ಕನ ನ್ನು ಸೋಲಿಸಿ ತಲೆಬಾಗುವಂತೆ ಮಾಡಿ ಅಧೀನಕ್ಕೆ ತಂದ. ಆದರೆ ಸ್ವಲ್ಪ ಕಾಲದಲ್ಲೇ ಆ ಸ್ಥಾನದಿಂದ ತೆಗೆದು ಹಾಕಲ್ಪಟ್ಟ. ಇವನ ಪೂರ್ವ ಸ್ನೇಹಿತರೊಂದಿಗೆ ಸೇರಿ ಅವನೊಂದಿಗೆ ದಂಗೆಯದ್ದು ಅರಮನೆಯನ್ನು ಮುತ್ತಿದರು. ಆದರೆ ಇವಳು ಆ ದಂಗೆಯನ್ನು ನಂಬಿಗಸ್ಥ ಮಂತ್ರ ನರವಾಹನನ ಸಹಾಯದಿಂದ ತಹಬದಿಗೆ ತಂದಳು. ಕೆಲಸಮಯದಲ್ಲೇ ನರವಾಹನ ರಾಣಿಯ ವಿಶ್ವಾಸವನ್ನು ಕಳೆದುಕೊಂಡ. ತನ್ನ ಆತ್ಮಗೌರವ ಉಳಿಸಿಕೊಳ್ಳಲು ಆತ್ಮಹತ್ಯೆ ಮಾಡಿಕೊಂಡ. ಈ ಸಮಯಕ್ಕೆ ಡಾಮರರೂ (ಉಂಬಳಿದಾರ ಭೂಮಾಲಿಕರು) ದಂಗೆಯೇಳಲು ಹವಣಿಸುತ್ತಿದ್ದರು. ಇದರ ಜೊತೆಗೆ ಸೇನಾಪತಿ ಠಕ್ಕನ ಸಾವಿನಿಂದಲೂ ರಾಣಿ ತೊಂದರೆಗೆ ಒಳಗಾಗಿದ್ದಳು. ಸಂದರ್ಭವನ್ನು ಎದುರಿಸಲು ಇವಳು ಫಲ್ಗುಣನನ್ನು ಹಿಂದಕ್ಕೆ ಕರೆದು ಪುನಃ ಸೇನಾಪತಿಯನ್ನಾಗಿ ನೇಮಿಸಿದಳು. ಇವನು ರಾಜಪುರಿಯನ್ನು (ರಾಜಾರಿ ಬೆಟ್ಟಪ್ರದೇಶವನ್ನು) ಗೆದ್ದುಕೊಟ್ಟ. 

14 ವರ್ಷ ಆಳ್ವಿಕೆಯನ್ನು ನಡೆಸಿದ ರಾಜಕುಮಾರ ಅಭಿಮನ್ಯು 972ರಲ್ಲಿ ನಂದಿಗುಪ್ತ ತ್ರಿಭುವನ ಹಾಗೂ ಭೀಮಗುಪ್ತ ಎಂಬ ಮೂವರು ಮಕ್ಕಳನ್ನು ಬಿಟ್ಟು ನಿಧನನಾದ. ಈ ಘಟನೆ ರಾಣಿಗೆ ಸ್ವಲ್ಪ ಕಾಲ ಆಘಾತವನ್ನುಂಟುಮಾಡಿತು. ಧಾರ್ಮಿಕ ವಿಧಿವಿಧಾನಗಳನ್ನು ಪಾಲಿಸುವು ದರಲ್ಲಿ ಸಮಯ ಕಳೆದುಹೋಯಿತು. ರಾಜಕೀಯದ ಹರಿತ ಕತ್ತಿಗೆ ನಂದಿಗುಪ್ತ, ತ್ರಿಭುವನ ಹಾಗೂ ಭೀಮಗುಪ್ತ ಒಬ್ಬರಾದ ಮೇಲೆ ಒಬ್ಬರು ಬಲಿಯಾದರು. ಸೇನಾಪತಿ ಫಲ್ಗುಣ ಕೂಡ ಸತ್ತ. 980ರಲ್ಲಿ ದಿಡ್ಡಾದೇವಿ ತಾನೇ ಸ್ವಯಂ ಸಿಂಹಾಸನದ ಮೇಲೆ ಕುಳಿತು ರಾಜ್ಯಭಾರ ನಡೆಸಿದಳು. ಪರ್ಣಿತ್ಸ ದೇಶದ ಖಶರ ತುಂಗನನ್ನು ಇವಳು ತನ್ನ ಮಂತ್ರಿಯನ್ನಾಗಿ ನೇಮಿಸಿಕೊಂಡಳು. ಅವನು ಪೂರ್ವದಲ್ಲಿ (ಎಮ್ಮೆಗಳನ್ನು ಕಾಯುವ) ಕೆಳವರ್ಗಕ್ಕೆ ಸಂಬಂಧಪಟ್ಟವನಾದುದರಿಂದ ಜನತೆ ಅವನ ಅಸ್ತಿತ್ವವನ್ನು ಪ್ರಶ್ನಿಸಿ ವಿರೋಧಿಸಿತು. ಅಂತೆಯೆ ಅವರು ದಿಡ್ಡಾದೀವಿಯ ಸೋದರ ಉದಯರಾಜನ ಪುತ್ರನಾದ ವಿಗ್ರಹರಾಜನನ್ನು ಕಾಶ್ಮೀರ ರಾಜಕೀಯವನ್ನು ಪರಿಶೀಲಿಸಲು (ಸರಿಪಡಿಸಲು) ಕರೆತಂದರು. ಇತ್ತ ರಾಜಪುರಿಯ ಪೃಥ್ವೀಪಾಲನನ್ನು ಯುದ್ಧದಲ್ಲಿ ಸೋಲಿಸಿ ತುಂಗ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡ. ವಯಸ್ಸಾಗಿ ಮುಪ್ಪನ್ನಡರಿದ ರಾಣಿ ವಿಗ್ರಹ ರಾಜನ ಸೋದರ ಸಂಗ್ರಾಮರಾಜನನ್ನು ತನ್ನ ತರುವಾಯ ಪಟ್ಟಕ್ಕೆ ಅಧಿಕಾರಿಯನ್ನಾಗಿ ನೇಮಿಸಿದಳು. ಆತ ಆಕೆಯ ಸೋದರಳಿಯ ಮತ್ತು ಲೋಹಾರವಂಶಜಾತ. ರಾಣಿ ನಿಧನಹೊಂದಿದಾಗ(1003) ಸಂಗ್ರಾಮರಾಜ ಸಿಂಹಾಸನವನ್ನು ಏರಿದ. ಆತ ಪಟ್ಟವನ್ನಲಂಕರಿಸುವುದ ರಿಂದ ಲೋಹಾರ ವಂಶ ಕಾಶ್ಮೀರದ ಮೇಲೆ ತನ್ನ ಆಧಿಕಾರವನ್ನು ಚಲಾಯಿಸಿತು. ಸಂಗ್ರಾಮ ರಾಜ 1003ರಲ್ಲಿ ಪಟ್ಟಕ್ಕೆ ಬಂದು 1028ರ ತನಕ ರಾಜ್ಯವಾಳಿದ. ಈತ ಅದಕ್ಷರಾಜನಾಗಿದ್ದ. ಆರಂಭದಲ್ಲಿ ತುಂಗನು ರಾಜ್ಯದ ಕಡಿವಾಣ ಹಿಡಿದಿದ್ದ. ಆತ 1014ರಲ್ಲಿ ತ್ರಿಲೋಚನಪಾಲಷಾಹಿ ದೊರೆಯ ಸಹಾಯಕ್ಕೆ ಹೋದ ಮಹರ್ಮದ (ಘಜನಿ) ಈ ಇಬ್ಬರ ಸೈನ್ಯವನ್ನೂ ಧೂಳೀಪಟ ಮಾಡಿದ. 1021ರಲ್ಲಿ ಅವನು ಲೋಹ್ಕೋಟ ಕೋಟೆಯನ್ನು ಮುತ್ತಲು ಹಿಮಾಲಯದ ತಡಿಯವರೆಗೆ ಹೋಗಿ ಅಲ್ಲಿ ನಿಲ್ಲಲು ನೆಲೆಯಿಲ್ಲದೆ ಲಾಹೋರಕ್ಕೆ ಹಿಂತಿರುಗಿದ. ಅನಂತರ ಕಾಶ್ಮೀರದ ಇತಿಹಾಸದಲ್ಲಿ ಒಂದಷ್ಟು ಕಾಲ ದಬ್ಬಾಳಿಕೆ, ದುರಾಡಳಿತ ಮುಂದುವರಿಯಿತು.	

(ಎಸ್.ಎಸ್.ಜೆಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ